ಚಿತ್ತಪ್ರಕೃತಿ

	ಒಬ್ಬ ವ್ಯಕ್ತಿಯ ಸಂವೇಗಶೀಲತೆಯಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ವಿವರಿಸಲು ಈ ಪದವನ್ನು ಬಹಳ ಪ್ರಾಚೀನಕಾಲದಿಂದಲೂ ಬಳಸಿಕೊಂಡು ಬಂದಿದ್ದಾರೆ. ಸಂವೇಗಶೀಲತೆಯ ವೈಲಕ್ಷಣ್ಯವೇ ಚಿತ್ತಪ್ರಕೃತಿ (ಟೆಂಪರಮೆಂಟ್). ಇದರ ಬಗ್ಗೆ ಅಮೆರಿಕದ ಪ್ರಸಿದ್ಧ ಮನಶಾಸ್ತ್ರಜ್ಞ ಜಿ.ಡಬ್ಲ್ಯು. ಆಲ್ಬೋರ್ಟ್ ಎಂಬುವನ ಅಭಿಪ್ರಾಯ ಹೀಗಿದೆ : ಒಬ್ಬ ವ್ಯಕ್ತಿಯ ಸಂವೇಗಾತ್ಮಕ ಸ್ವಭಾವದ ವಿಲಕ್ಷಣ ಘಟನೆಯೇ ಚಿತ್ತಪ್ರಕೃತಿ. ಅಂದರೆ, ಒಂದು ಸಂವೇಗಾತ್ಮಕ ಪ್ರಚೋದನೆಗೆ ವ್ಯಕ್ತಿ ಒಳಗಾಗುವ ಪ್ರವಣತೆ (ಸಸೆಪ್ಟಿಬಿಲಿಟಿ), ಆತ ತೋರಿಸುವ ಅನುಕ್ರಿಯೆಯ ಬಲ ಮತ್ತು ವೇಗಗಳ ಸಾಂಪ್ರದಾಯಿಕತೆ; ಅವನಲ್ಲಿರುವ ಚಿತ್ತ ವೃತ್ತಿಯ (ಮೂಡ್) ಗುಣ ಮತ್ತು ತೀವ್ರತೆಗಳ ಚಾಂಚಲ್ಯಗಳಲ್ಲಿ ಕಂಡುಬರುವ ವೈಲಕ್ಷಣ್ಯಗಳು-ಇವುಗಳೆಲ್ಲ ಚಿತ್ತಪ್ರಕೃತಿಯಲ್ಲಿ ಸಮಾವೇಶವಾಗಿರುತ್ತವೆ. ಆಲ್ಬೋರ್ಟನ ಈ ವ್ಯಾಖ್ಯೆಯ ಪ್ರಕಾರ ಚಿತ್ತಪ್ರಕೃತಿ ಜನ್ಮಜಾತ ಸ್ವರೂಪಾತ್ಮಕ ಲಕ್ಷಣಗಳಲ್ಲಿ ಒಂದೆನಿಸುವುದಾದರೂ ಹುಟ್ಟಿದಂದಿನಿಂದ ಸಾಯುವವರೆಗೂ ಬದಲಾಗದ ಗುಣವಾಗಲಾರದು. ದೇಹಸ್ವರೂಪ (ಮೈಕಟ್ಟು) ಮತ್ತು ಬುದ್ಧಿಶಕ್ತಿಗಳಂತೆಯೇ ಇದೂ ಒಂದು ರೀತಿಯಲ್ಲಿ ಬದಲಾವಣೆ ಹೊಂದುವುದು ನಿಜ. ವೈದ್ಯಕೀಯ, ಶಸ್ತ್ರಚಿಕಿತ್ಸಾತ್ಮಕ ಮತ್ತು ಪೋಷಕಾಂಶಗಳ ಕಾರಣದಿಂದಾಗಿ ವ್ಯಕ್ತಿತ್ವ ವಿಕಾಸವಾದಂತೆಲ್ಲ ಚಿತ್ತಪ್ರಕೃತಿ ಬದಲಾಗುತ್ತ ಹೋಗಬಹುದು. ಆದರೆ ಅಂಥ ಬದಲಾವಣೆಗೆ ಒಂದು ಪರಿಮಿತಿಯುಂಟು.

	ಚಿತ್ತಪ್ರಕೃತಿ ಮತ್ತು ಚಿತ್ತವೃತ್ತಿ : ವ್ಯಕ್ತಿಯ ಭಾವನಾಸ್ಥಿತಿಯಲ್ಲಿ ಆಗಾಗ್ಗೆ ಉಂಟಾಗುವ ಚಾಂಚಲ್ಯಗಳೇ ಚಿತ್ತವೃತ್ತಿಗಳೆನಿಸುತ್ತವೆ. ಒಂದು ಸಮಯದಲ್ಲಿ ಆನಂದಭರಿತನಾಗಿದ್ದ ವ್ಯಕ್ತಿ ಮತ್ತೊಂದು ಸಮಯದಲ್ಲಿ ವಿಷಣ್ಣನಾಗಿ ಕುಳಿತಿರಬಹುದು. ಹೀಗೆ ಭಾವನಾಸ್ಥಿತಿಯಲ್ಲಿ ಆಗುವ ಚಾಂಚಲ್ಯಗಳು ದಿನವೂ ತೋರಬಹುದು. ಇಲ್ಲವೆ ಆಗಾಗ ಕಾಣಿಸಿಕೊಳ್ಳಬಹುದು. ಇಂಥ ಚಿತ್ತವೃತ್ತಿಗಳಲ್ಲಿ ಸಾಪೇಕ್ಷವಾಗಿ ಶಾಶ್ವತವೆನಿಸುವ ವಿನ್ಯಾಸಗಳೂ ಕಂಡುಬಂದಾಗ ಅವು ಚಿತ್ತಪ್ರಕೃತಿಗಳೆನಿಸುತ್ತವೆ. ಉದಾಹರಣೆಗೆ, ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಬರುವ ಆಗುಹೋಗುಗಳಿಗೆ ಅನುಗುಣವಾಗಿ ಸಂತೋಷ-ಸಂತಾಪಭಾವಗಳನ್ನು ಆಗಾಗ್ಗೆ ಪ್ರಕಟಿಸುತ್ತಿದ್ದರೂ ಅಂಥ ಭಾವಗಳು ತಾತ್ಕಾಲಿಕವಾಗಿರುತ್ತವೆ. ಅವು ಕೇವಲ ಅಲ್ಪಕಾಲಿಕವಾಗಿದ್ದು ಚಿತ್ತವೃತ್ತಿಗಳೆನಿಸಿದರೆ, ಅವುಗಳೇ ವೃತ್ತಿಯಲ್ಲಿ ನೆಲೆನಿಂತು ಸಾಪೇಕ್ಷವಾಗಿ ಶಾಶ್ವತವೆನಿಸಿದಾಗ ಮತ್ತು ಒಂದು ಸ್ಪಷ್ಟವಿನ್ಯಾಸವನ್ನು ಪಡೆದಾಗ ಚಿತ್ತಪ್ರಕೃತಿಗಳೆನಿಸುತ್ತವೆ. ಒಬ್ಬ ವ್ಯಕ್ತಿಯಲ್ಲಿ ಉಲ್ಲಾಸಶೀಲತೆ ಒಂದು ಸಾಮಾನ್ಯ ಲಕ್ಷಣವಾಗಿ ಕಂಡುಬಂದಾಗ, ಅಂಥ ವ್ಯಕ್ತಿಯನ್ನು ಉಲ್ಲಾಸಶೀಲ ಅಥವಾ ಉಲ್ಲಾಸಶೀಲ ಚಿತ್ತಪ್ರಕೃತಿಯ ವ್ಯಕ್ತಿ ಎಂದು ಕರೆಯಲಾಗುತ್ತದೆ. ವಿಷಣ್ಣ ಶೀಲತೆಯನ್ನೇ ಸಾಮಾನ್ಯಲಕ್ಷಣವಾಗಿ ಪಡೆದಿರುವ ವ್ಯಕ್ತಿಯೂ ಒಂದೊಂದು ಸಲ ಉಲ್ಲಾಸಭಾವವನ್ನು ಪ್ರಕಟಿಸಬಹುದು. ಆಗ ಅಂಥ ಭಾವಪ್ರಕಟಣೆಗೆ ಉಲ್ಲಾಸ ಚಿತ್ತವೃತ್ತಿ ಎನ್ನುತ್ತೇವೆಯೇ ಹೊರತು ಉಲ್ಲಾಸಶೀಲತೆ ಆಥವಾ ಚಿತ್ತಪ್ರಕೃತಿ ಅದಕ್ಕೆ ಅನುಗುಣವಾದ ಸಂವೇಗಾನುಭವವನ್ನು ಪಡೆಯಲು ವ್ಯಕ್ತಿಯನ್ನು ಸಿದ್ಧಸ್ಥಿತಿಯಲ್ಲಿರಿಸುತ್ತದೆ. ಒಬ್ಬ ವ್ಯಕ್ತಿ ಸಂತೋಷದಿಂದಿದ್ದಾಗ, ಅಲ್ಪಪ್ರಮಾಣದ ಅಪಜಯಗಳನ್ನು ವಿನೋದಪ್ರದ ಸವಾಲುಗಳು ಎಂದು ಪರಿಗಣಿಸಿ ಅವುಗಳಿಗೆ ಸುಲಭವಾಗಿ ಹೊಂದಿಕೊಳ್ಳಬಹುದು. ಅದಕ್ಕೆ ಬದಲಾಗಿ, ಅವನಲ್ಲಿ ಗೊಂದಲ ಚಿತ್ತವೃತ್ತಿಯಿದ್ದರೆ, ಅಂಥ ಅಪಜಯಗಳಿಂದ ಆತನಲ್ಲಿ ಕೋಪೋದ್ರೇಕ ಮತ್ತು ಹತಾಸೆಗಳು ಮೂಡಬಹುದು.

	ಚಿತ್ತಪ್ರಕೃತಿಯ ದೈಹಿಕ ನೆಲೆಗಳು : ಚಿತ್ತಪ್ರಕೃತಿ ವ್ಯಕ್ತಿತ್ವದ ಒಂದು ಪ್ರಧಾನ ಅಂಗಾಂಶವೆಂದು ಹೇಳಿದ ಮೇಲೆ ಅದರ ನೆಲೆಗಳ ಬಗ್ಗೆ ಕೆಲವು ವಿವರಗಳನ್ನು ತಿಳಿಯುವ ಅಗತ್ಯವಿದೆ. ವ್ಯಕ್ತಿತ್ವ ಅನುವಂಶೀಯ ಹಾಗೂ ಪ್ರತ್ಯಾವರಣಾತ್ಮಕ ಕಾರಣಾಂಶಗಳ ನಿರಂತರ ಸಾಹಚರ್ಯದ ಪ್ರತೀಕವೆಂದು ಹೇಳುವುದುಂಟು. ಆದರೆ ಈ ಕಾರಕಾಂಶಗಳಲ್ಲಿ ಯಾವುದು ಎಷ್ಟು ಪ್ರಧಾನವೆಂಬ ಪ್ರಶ್ನೆ ಎದ್ದಾಗ, ಇತ್ತೀಚಿನ ಸಂಶೋಧನೆಗಳ ಆಧಾರದಿಂದ, ವ್ಯಕ್ತಿತ್ವರೂಪಣೆಯಲ್ಲಿ ಪ್ರತ್ಯಾವರಣದ ಪ್ರಭಾವ ಹೆಚ್ಚಿನದು ಎಂಬುದು ತಿಳಿದು ಬಂದಿದೆ. ಆದರೆ ಚಿತ್ತಪ್ರಕೃತಿಯ ಅರ್ಥನಿರೂಪಣೆ ಮಾಡಿದಾಗ ಹಿಂದೆಯೇ ಪ್ರಸ್ತಾಪಿಸಿದಂತೆ, ಇದು ಮೂಲತಃ ಅನುವಂಶೀಯ ಹಾಗೂ ದೇಹಸ್ವರೂಪಾತ್ಮಕ ನೆಲೆಗಳನ್ನು ಹೊಂದಿರುವುದು ಕಂಡುಬರುತ್ತದೆ. ಈ ಸಮಸ್ಯೆಗೆ ಸಂಬಂಧಿಸಿದಂತೆ ಬಹಳ ಪ್ರಾಚೀನಕಾಲದಿಂದಲೂ ಸೈದ್ಧಾಂತಿಕ ಚರ್ಚೆ ನಡೆದಿರುವುದರ ಜೊತೆಗೆ, ಆಧುನಿಕ ಮನೋವಿಜ್ಞಾನದಲ್ಲಿ ಸಂಶೋಧನೆಗಳೂ ನಡೆದಿವೆ.

	ಶರೀರಧಾತುಗಳು ಮತ್ತು ಚಿತ್ತಪ್ರಕೃತಿ : ಶರೀರದಲ್ಲಿವೆ ಎಂದು ಹೇಳಲಾದ ನಾಲ್ಕು ರೀತಿಯ ಧಾತುಗಳು, ವ್ಯಕ್ತಿಯ ಚಿತ್ತಪ್ರಕೃತಿಯನ್ನು ನಿರ್ಧರಿಸುತ್ತವೆ ಎಂಬವಾದ ಬಹಳ ಪ್ರಾಚೀನವಾದುದು. ಪ್ರಾಚೀನ ಭಾರತೀಯರೂ ಗ್ರೀಕರೂ ಈ ವಾದವನ್ನು ಮುಂದಿಟ್ಟವರಲ್ಲಿ ಮೊದಲಿಗರು. ರಕ್ತ, ವಾತ, ಪಿತ್ತ ಮತ್ತು ಕಫಗಳೆಂಬ ಧಾತುಗಳ ಸಾಪೇಕ್ಷ ಪ್ರಾಬಲ್ಯಕ್ಕೆ ಅನುಗುಣವಾಗಿ ವ್ಯಕ್ತಿಯಲ್ಲಿ ನಾಲ್ಕು ರೀತಿಯ ಚಿತ್ತಪ್ರಕೃತಿಗಳು ಕಾಣಿಸಿಕೊಳ್ಳುತ್ತವೆ ಎಂಬುದು ಈ ವಾದದ ಸಾರ. ಅಲ್ಲದೆ ಭಾರತೀಯ ವಿಚಾರಧಾರೆಯಲ್ಲಿಯೂ ವಿವಿಧ ಆಹಾರಾಂಶಗಳು ಹಾಗೂ ಅವುಗಳಿಂದ ಸಿದ್ಧವಾದ ಶರೀರ ಧಾತುಗಳು ಇರುತ್ತವೆ ಎಂಬುದೂ ಶರೀರ ಧಾತು ಸಿದ್ಧಾಂತಕ್ಕೆ ಒಂದು ರೀತಿಯ ಪುಷ್ಟಿಯನ್ನು ಕೊಡಬಲ್ಲದು.

	ಶರೀರ ಧಾತುಸಿದ್ಧಾಂತ ಕ್ರಿ. ಪೂ. 5ನೆಯ ಶತಮಾನದಲ್ಲಿದ್ದ ಗ್ರೀಕ್ ವಿಚಾರವಂತನಾದ ಎಂಪೆಡೋಕ್ಲೀಸನ ವಿಚಾರಗಳಿಂದ ಉದ್ಭವಿಸಿದೆ ಎಂದು ಹೇಳಬಹುದು. ಪ್ರಕೃತಿ ಆತನ ಪ್ರಕಾರ ವಾಯು, ಭೂಮಿ, ಅಗ್ನಿ ಮತ್ತು ಜಲಗಳೆಂದು ನಾಲ್ಕು ಮೂಲಾಂಶಗಳಿಂದ ರೂಪಗೊಂಡಿದೆ. ಭಾರತೀಯ ವಿಚಾರಧಾರೆಯಲ್ಲಿರುವ ಪಂಚಭೂತ ಸಂಕಲ್ಪನೆಗೂ ಇದಕ್ಕೂ ನಿಕಟಸಾಮ್ಯವಿರುವುದು ಗಮನಾರ್ಹ ಅಂಶ. ಬೃಹತ್ ಪ್ರಕೃತಿ ಮೇಲೆ ಹೇಳಲಾದ ಮೂಲಾಂಶಗಳಿಂದ ರೂಪಗೊಂಡಿದ್ದರೆ, ಅದರ ಅಣುವೆನಿಸಿದ ಮಾನವನಲ್ಲಿಯೂ ಆ ಮೂಲಾಂಶಗಳು ಕ್ರಿಯಾಶೀಲವಾಗಿರಬೇಕಾದುದು ತರ್ಕಬದ್ಧವಾದ ಸಂಗತಿ. ಈ ರೀತಿಯಲ್ಲಿ ತರ್ಕಿಸಿದವೆನೆಂದರೆ, ವೈದ್ಯವಿಜ್ಞಾನದ ಪಿತೃವೆನಿಸಿದ ಹಿಪಾಕ್ರಟೀಸ್. ಆಶ್ಚರ್ಯವೆಂದರೆ, ಅಂತಃಸ್ರಾವ ವಿಜ್ಞಾನದ ಅಂಕುರವಾಗುವುದಕ್ಕೆ ಬಹಳ ಹಿಂದೆಯೇ ಮೇಲೆ ಹೇಳಲಾದ ಮೂಲಾಂಶಗಳು ಮನುಷ್ಯನ ಶರೀರದಲ್ಲಿ, ಧಾತುರೂಪದಲ್ಲಿ ಪ್ರತಿಫಲಿಸಿವೆ ಎಂಬ ಸತ್ತ್ವಪೂರ್ಣ ಪ್ರಾಕ್ಕಲ್ಪನೆಯ ಉದಯವಾಗಿತ್ತು.

	ಹಿಪಾಕ್ರಟೀಸ್ ಹೇಳಿದ ಧಾತುಗಳೆಂದರೆ-ರಕ್ತ, ವಾತ, ಪಿತ್ತ ಮತ್ತು ಕಫ (ಶ್ಲೇಷ್ಮ). ಇವುಗಳಲ್ಲಿ ಯಾವುದೇ ಒಂದು ಧಾತು ಪ್ರಧಾನವಾಗಿದ್ದರೆ, ಅದಕ್ಕನುಗುಣವಾದ ಚಿತ್ತಪ್ರಕೃತಿಯೊಂದು ವ್ಯಕ್ತಿಯಲ್ಲಿ ಪ್ರಧಾನವಾಗಿದ್ದರೆ ಎಂಬುದು ಆತನ ಊಹೆಯಾಗಿತ್ತು. ಈ ಊಹೆಗೆ ಹೆಚ್ಚಿನ ರೂಪವನ್ನು ಕೊಟ್ಟವನೆಂದರೆ ಕ್ರಿ.ಶ.2ನೆಯ ಶತಮಾನದಲ್ಲಿದ್ದ ರೋಮಿನ ವೈದ್ಯ ಗೇಲನ್. ಆತನ ಪ್ರಕಾರ, ಹಿಪಾಕ್ರಟೀಸ್ ಹೇಳಿದ ಧಾತುಗಳು ಚಿತ್ತಪ್ರಕೃತಿಗಳಿಗೆ ಮಾತ್ರವಲ್ಲದೆ ರೋಗಿಗಳಿಗೂ ಸಂಬಂಧಿಸಿರುತ್ತವೆ. ಉದಾಹರಣೆಗೆ ಪಿತ್ತರಸ ಅಧಿಕವಾದಾಗ ವ್ಯಕ್ತಿ ಜ್ವರದಿಂದ ನರಳಿದರೆ, ವಾತ ಹೆಚ್ಚಿದಾಗ ಉಷ್ಣತೆ ಮತ್ತು ಕ್ಷಯಗಳಿಂದ ನರಳುತ್ತಾನೆ. ವಿಶ್ವ ಮೂಲಾಂಶಗಳು, ಶರೀರ ಧಾತುಗಳು ಮತ್ತು ಚಿತ್ತಪ್ರಕೃತಿಗಳ ನಡುವಣ ಸಂಬಂಧಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ಕಾಣಬಹುದು.

 ವಿಶ್ವಮೂಲಾಂಶಗಳು
ಅವುಗಳ
ಗುಣಗಳು
ಅನುಗುಣ
ವಾದಶರೀರ
ಧಾತುಗಳು
ಅನುಗುಣವಾದ
ಚಿತ್ತಪ್ರಕೃತಿಗಳು

ಗಾಳಿ (ವಾಯು)
ಶಾಖ ಮತ್ತು ಶೈತ್ಯ
ರಕ್ತ
ಉಲ್ಲಾಸ

ಮಣ್ಣು (ಭೂಮಿ)
ತಂಪು ಮತ್ತು ಶುಷ್ಕ
ವಾತ
ವಿಷಣ್ಣತೆ

ಬೆಂಕಿ (ಅಗ್ನಿ)
ಶಾಖ ಮತ್ತು ಶುಷ್ಕ
ಪಿತ್ತ
ಸಿಡುಕುತನ

ನೀರು (ಜಲ)
ತಂಪು ಮತ್ತು ಶೈತ್ಯ
ಕಫ(ಶ್ಲೇಷ್ಮ)
ಅಲಸತೆ(ಜಡತೆ)

				 			
	ಕೋಷ್ಟಕದಲ್ಲಿ ಕೊಡಲಾಗಿರುವ ನಾಲ್ಕು ರೀತಿಯ ಚಿತ್ತಪ್ರಕೃತಿಗಳುಳ್ಳವರಲ್ಲಿ ಉಲ್ಲಾಸಿಗಳು-ಆಶಾವಾದ, ಪುನರ್ವರ್ತನಶೀಲತೆ, ಚಟುವಟಿಕೆ ಮತ್ತು ನಿರಾಳ ಭಾವನೆಗಳಿಂದಲೂ ವಿಷಣ್ಣರು-ಮಂಕು, ಚಿಂತೆ, ರೋಗಭಯ, ಶಂಕೆ ಮತ್ತು ಖಿನ್ನತೆಗಳಿಂದಲೂ ಸಿಡುಕರು-ಶೀಘ್ರವಾಗಿ ತೀವ್ರವಾಗಿ ಭಾವೋದ್ರೇಕಗಳಿಗೆ ಒಳಗಾಗುವರೂ ಆಲಸಿಗಳು-ಜಡತೆ, ಶೀತಲಭಾವ ಮತ್ತು ಸೋಮಾರಿತನಗಳಿಂದಲೂ ಕೂಡಿರುತ್ತಾರೆ.

	ಶರೀರ ಧಾತುಗಳು ಕೇವಲ ನಾಲ್ಕು ಮಾತ್ರವಲ್ಲ ಹಾಗೂ ಅಂತಃಸ್ರಾವಗಳು ಹಲವು-ಎಂಬುದನ್ನು ಆಧುನಿಕ ವೈಜ್ಞಾನಿಕ ಸಂಶೋಧನೆಗಳು ಬೆಳಕಿಗೆ ತಂದಿದ್ದರೂ ವ್ಯಕ್ತಿತ್ವದ ಸಂವೇಗಾತ್ಮಕ ತಳಹದಿ ಎನಿಸಿರುವ ಚಿತ್ತಪ್ರಕೃತಿ ದೇಹದ ರಾಸಾಯನಿಕ ವ್ಯಾಪಾರದಿಂದ ನಿರ್ಧಾರವಾಗುತ್ತದೆ ಎಂಬ ಊಹೆ ಮಹತ್ತ್ವ ಪೂರ್ಣವಾದುವಲ್ಲದೆ, ಪುರಾತನರು ವಿವರಿಸಿರುವ ನಾಲ್ಕು ಪ್ರರೂಪಗಳು ಹೆಚ್ಚು ನವ್ಯರೀತಿಯವಾಗಿದ್ದು, ಚಿತ್ತಪ್ರಕೃತಿಯನ್ನು ವರ್ಗೀಕರಿಸಲು ಉಪಯೋಗಿಸಲಾಗುವಂಥ ಯಾವುದೇ ಆಧುನಿಕ ಆಯಾಮಕ್ಕಾದರೂ ಸರಿಹೊಂದುತ್ತವೆ ಎಂಬುದು ಅಲ್ಬೋರ್ಟನ ಅಭಿಮತ. ಅಲ್ಲದೆ ಈ ನಾಲ್ಕು ಗುಣಗಳನ್ನೂ ಚಿತ್ತಪ್ರಾಕೃತಿಕ ಆಯಾಮಗಳಲ್ಲಿ ತಾರ್ಕಿಕ ಹಾಗೂ ಪಾರಿಮಾಣಿಕ ದೃಷ್ಟಿಕೋನಗಳಿಂದಲೂ ಪ್ರತಿಪಾದಿಸುವ ಸಾಧ್ಯತೆ ಇದೆ.

	ಮೇಲೆ ಪ್ರಸ್ತಾವಿಸಲಾದ ಚಿತ್ತಪ್ರಾಕೃತಿಕ ಪ್ರರೂಪಗಳು, ಸಂವೇಗಾತ್ಮಕತೆಯ (ವೇಗ ಮತ್ತು ತೀವ್ರತೆ) ವಿವಿಧ ಆಯಾಮಗಳಲ್ಲಿ ಹೇಗೆ ಒಪ್ಪಿಸಬೇಕೆಂಬುದನ್ನು ಆಲ್ಬೋರ್ಟ ಮುಂದಿನ ಮಾದರಿಗಳಿಂದ (ಚಿತ್ರ 1) ಸ್ಪಷ್ಟಪಡಿಸುತ್ತಾನೆ.

	ಹಿಪಾಕ್ರಟೀಸನಿಂದ ಪ್ರಾರಂಭವಾದ ಶರೀರಧಾತುಸಿದ್ಧಾಂತ ಮೊದಲಿಗೆ ಗೇಲನ್ನನಿಂದ ಸುಧಾರಿತವಾಯಿತು. ಮುಂದೆ ರೋಷ್ಕನ್, ಎಫ್,ಡಬ್ಲ್ಯೂ.ಬೆನಕೆ, ಹೇಮನ್ ಮತ್ತು ವೆಯ್ಸ್ ಮನ್, ವ್ಯಾಪಕ ಅಧ್ಯಯನದ ಆಧಾರದಮೇಲೆ ಎಂಟು ವಿಧವಾದ ಚಿತ್ತಪ್ರಕೃತಿಗಳನ್ನೂ ಹೇಳಿದ್ದಾರೆ. ಅವು: ಅಪರಿಪಕ್ವತೆ, ಜಡತೆ, ದುರ್ಬಲತೆ, ಭಾವಾತಿರೇಕ, ಉಲ್ಲಾಸ, ಉದಾಸೀನತೆ, ಸಿಡುಕು ಮುಂತಾದ ಅತಿರಾಗಭಾವಗಳು. ಹಿಪಾಕ್ರಟೀಸ್ ಮತ್ತು ಗೇಲನ್ ಪ್ರತಿಪಾದಿಸಿದ ನಾಲ್ಕು ರೀತಿಯ ಚಿತ್ತಪ್ರಕೃತಿಗಳೂ ಇವುಗಳಲ್ಲಿ ಸಮಾವೇಶವಾಗಿರುವುದನ್ನು ಕಾಣಬಹುದು. 

	ರೋಸನಫನ ಪ್ರಕಾರ ನಾಲ್ಕು ರೀತಿಯ ಮನೋರೋಗಲಕ್ಷಣಾತ್ಮಕ ಚಿತ್ತಪ್ರಕೃತಿಗಳಿವೆ : ಸಮಾಜಬಾಹಿರತನ, ಚಕ್ರವಿಕ್ಷಿಪ್ತಾತ್ಮಕತೆ (ಸೈಕ್ಲೊತೈಮಿಯ), ಸ್ವಲೀನತನ ಮತ್ತು ಅಪಸ್ಮಾರತನ. ಐದನೆಯ ಚಿತ್ತಪ್ರಕೃತಿ ಸಾಮಾನ್ಯರಲ್ಲಿ ಕಂಡುಬರುವ ವಿಶ್ರಾಂತಭಾವ.

ಚಿತ್ರ-1

  ಅ-ಸಂವೇಗಾತ್ಮಕತೆ ವೇಗ ತೀರ್ವತೆಗಳ; ಆ- ಅಗಲ ಮತ್ತು ಆಳಗಳ; ಇ-ಉತ್ತೇಜಕತೆ ಮತ್ತು 
	ರಾಗಭಾವಗಳ ಮತ್ತು ಈ-ಕ್ರಿಯಾಮಟ್ಟ ಮತ್ತು ಕ್ರಿಯಾದಿಸೆಗಳ ಆಯಾಮಗಳಲ್ಲಿ. ನಾಲ್ಕು ರೀತಿಯ 
	ಚಿತ್ತಪ್ರಕೃತಿಗಳ ಸ್ಥಾನ ಮಾನವೇನೆಂಬುದನ್ನು ಸೂಚಿಸುತ್ತವೆ.
	ಹೀಗೆ ಹಲವರು ಪ್ರತಿಪಾದಿಸಿದ ಚಿತ್ತಪ್ರಕೃತಿಪ್ರರೂಪಗಳಲ್ಲಿ ಹೆಚ್ಚಾಗಿ ಸಂಶೋಧಕರ ಮನಸ್ಸನ್ನು ಆಕರ್ಷಿಸಿದ ಪ್ರತಿಪಾದನೆಗಳನ್ನು ಕೊಟ್ಟವರು ಪ್ರಮುಖವಾಗಿ ಕ್ರೆಷ್ಮರ್ ಮತ್ತು ಷೆಲ್ ಡನ್.

	ಕ್ರೆಷ್ಮರ್ ಮತ್ತು ಅಂಗರಚನಾತ್ಮಕ ಪ್ರರೂಪಗಳು : ಜರ್ಮನಿಯ ಸುಪ್ರಸಿದ್ಧ ಮನೋವೈದ್ಯನೆನಿಸಿದ್ದ ಕ್ರೆಷ್ಮರ್ ಚಿತ್ತಪ್ರಕೃತಿಗಳಿಗೂ ದೇಹರಚನೆಗೂ ನಿಕಟ ಸಂಬಂಧವಿದೆ ಎಂದು ಪ್ರತಿಪಾದಿಸಿದ. ಒಂದೇ ರೀತಿಯ ಮುಖಲಕ್ಷಣಗಳ ಹಿನ್ನಲೆಯಲ್ಲಿ, ಒಂದೇರೀತಿಯ, ಸ್ವರೂಪಲಕ್ಷಣಗಳು ಇರುತ್ತವೆಯಲ್ಲದೆ ಒಂದು ರೀತಿಯ ಬಾಹ್ಯಲಕ್ಷಣಗಳ ಹಿನ್ನೆಲೆಯಲ್ಲಿ ಅದೇ ರೀತಿಯ ಮಾನಸಿಕ ಶಕ್ತಿಗಳು ಕ್ರಿಯಾಶೀಲವಾಗಿರುತ್ತವೆ-ಎಂಬುದು ಕ್ರೆಷ್ಮರನ ಅಭಿಮತ. ತನ್ನ ಪ್ರಾಕಲ್ಪನೆಯನ್ನು ಪರಿಶೀಲಿಸಲು ಆತನ ಅನೇಕ ಮಂದಿ ರೋಗಿಗಳ ದೇಹರಚನೆಗಳನ್ನೂ ಮಾನಸಿಕ ಲಕ್ಷಣಗಳನ್ನೂ ಅವಲೋಕಿಸಿ ಅವುಗಳ ಆಧಾರದಮೇಲೆ ತನ್ನ ಸಿದ್ಧಾಂತವನ್ನು ರೂಪಿಸಿದ್ದಾನೆ. ಕ್ರೆಷ್ಮರನದು ನೈದಾನಿಕ ಅಧ್ಯಯನ. ಪ್ರಧಾನ ದೈಹಿಕ ಹಾಗೂ ಮಾನಸಿಕ ಲಕ್ಷಣಗಳ ಪರಸ್ಪರ ಸಹಸಂಬಂಧವನ್ನು ಗುರುತಿಸಿ ಪ್ರಮುಖವಾಗಿ ಎರಡು ಪ್ರರೂಪಗಳನ್ನು ಆತ ಪ್ರತಿಪಾದಿಸಿದ್ದಾನೆ. ಅವು ಚಕ್ರವಿಕ್ಷಿಪ್ತಶೀಲತೆ ಮತ್ತು ಮನೋವಿದಳನ ಶೀಲತೆ (ಸ್ಕಿಜೊತೈಮಿಯ) ಸಾಮಾನ್ಯವಾಗಿ ಗುಂಡುಕಾಯದ (ಪಿಕ್‍ನಿಕ್) ವ್ಯಕ್ತಿಗಳು ಚಕ್ರವಿಕ್ಷಿಪ್ತಶೀಲ ಚಿತ್ತಪ್ರಕೃತಿಯಿಂದ ಕೂಡಿದ್ದರೆ ನೀಳಕಾಯದ (ಆಸ್ತೆನಿಕ್) ವ್ಯಕ್ತಿಗಳು ಮನೋವಿದಳನ ಶೀಲಚಿತ್ತಪ್ರಕೃತಿಯಿಂದ ಕೂಡಿರುತ್ತಾರೆ. ಕ್ರೆಷ್ಮರ್ ತನ್ನ ರೊಗಿಗಳಲ್ಲಿ ಸಾಮಾನ್ಯವಾಗಿ ಗುಂಡುಕಾಯಗಳಿಂದ ಕೂಡಿದವರೂ ಮನೋವಿದಳಿತ ರೋಗಿಗಳು ನೀಳದೇಹಧಾರಿಗಳೂ ಆಗಿರುವುದನ್ನು ಗುರುತಿಸಿದ. ಹೀಗೆ ತನ್ನ ನೈದಾನಿಕ ಅಧ್ಯಯನದ ಕಾರ್ಯಪ್ರರೂಪಗಳು ಮತ್ತು ಚಿತ್ತಪ್ರಕೃತಿಗಳ ನಡುವಣ ಸಂಬಂಧವನ್ನು ಗುರುತಿಸಿದ ಮೇಲೆ ಅಂಥ ಸಂಬಂಧಗಳು ಕೇವಲ ನೈದಾನಿಕ ಕ್ಷೇತ್ರಕ್ಕೆ ಸೀಮಿತವಾಗಿರದೆ, ಸಾಮಾನ್ಯ ಜನರಲ್ಲಿಯೂ ಕಂಡುಬರುತ್ತವೆ ಎಂದು ಹೇಳಿದ. ಆತನ ಪ್ರಕಾರ ಮನೋವಿದಳನಶೀಲ ವ್ಯಕ್ತಿಗಳಲ್ಲಿ ಪ್ರಧಾನವಾಗಿ ಕಂಡುಬರುವ ಪ್ರಮುಖ ಮಾನಸಿಕ ಲಕ್ಷಣಗಳೆಂದರೆ ರೂಪಪ್ರತಿಕ್ರಿಯಾಶೀಲತೆ (ಫಾರಮ್ ರಿಯ್ಯಾಕ್ಟಿವಿಟಿ), ಅಮೂರ್ತತೆ ಮತ್ತು ವಿಶ್ಲೇಷಣಾತ್ಮಕ ಪ್ರತಿಕ್ರಿಯೆಗಳು. ಅಲ್ಲದೆ ಅಂಥ ವ್ಯಕ್ತಿಗಳು ಶೀಘ್ರತರದ ವೈಯಕ್ತಿಕಗತಿ ಮತ್ತು ಆಂತರಿತ ಕಾರ್ಯಾಲಯ ಬದ್ಧತೆ (ವರ್ಕ ರಿದಮ್) ಗಳಿಂದಲೂ ಕೂಡಿರುತ್ತಾರೆ. ಅವರಲ್ಲಿ ಉತ್ಕøಷ್ಟ ರೀತಿಯ ಸ್ನಾಯುಸಂಘಟನೆ ಇದ್ದರೂ ಅಧಿಕಮಟ್ಟದ ಸ್ನಾಯು ಆಕರ್ಷಣೆಯೂ ಇರುತ್ತದೆ. ಅವರು ಅತಿಕ್ರಮಬದ್ದರೂ ಸತತ ಪ್ರಯತ್ನಶೀಲರೂ ಆಗಿರುತ್ತಾರೆ. ಅತಿಯಾದ ರಾಗಭಾವಗಳಿಂದ ಕೂಡಿರುವ ಈ ಜನರಲ್ಲಿ ಸ್ವಾಯತ್ತತಂತು ಕ್ರಿಯೆ ಹೆಚ್ಚಾಗಿರುತ್ತದೆ. ತದ್ವಿರುದ್ಧವಾಗಿ, ಚಕ್ರ ವಿಕ್ಷಿಪ್ತಶೀಲರು ಪ್ರಮುಖವಾಗಿ ವರ್ಣಪ್ರತಿಕ್ರಿಯಾಶೀಲರೂ (ಕಲರ್ ರಿಆ್ಯಕ್ಟಿವಿಟಿ) ಸಮಗ್ರ ದೃಷ್ಟಿಯವರೂ ಸಂಶ್ಲೇಷಣ ವೃತ್ತಿಯವರೂ ಆಗಿರುತ್ತಾರೆ. ಅವರದು ನಿಧಾನ ಸ್ವಭಾವ, ಲಯಬದ್ಧ ರೀತಿನೀತಿ. ಇಂಥ ಜನ ಹೆಚ್ಚಾಗಿ ಸಂಗಶೀಲರಾಗಿರುತ್ತಾರೆ. 

	ಕ್ರೆಷ್ಮರನ ಸಿದ್ಧಾಂತದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹಲವು ಸಂಶೋಧನೆಗಳು ನಡೆದದ್ದುಂಟು. ಅವುಗಳಲ್ಲಿ, ನೈದಾನಿಕ ಅಧ್ಯಯನಗಳಿಂದ ದೊರೆತ ತಥ್ಯಾಂಶಗಳು ಅವನ ಸಿದ್ಧಾಂತಕ್ಕೆ ಸ್ವಲ್ಪ ಪುಷ್ಟಿಯನ್ನು ಒದಗಿಸಿದರೂ ಸಾಮಾನ್ಯ ಜನತೆಯಮೇಲೆ ನಡೆಸಲಾದ ಅಧ್ಯಯನಗಳು ಅಷ್ಟಾಗಿ ಆಶಾದಾಯಕವಾಗಲಿಲ್ಲ. ಒಂದು ನೈದಾನಿಕ ಅಧ್ಯಯನದಲ್ಲಿ, ವೆಸ್ಟ್ ಫಲ್ ಎಂಬಾಂತ 8,000 ಮನೋರೋಗಿಗಳ ಮೇಲೆ ಅಧ್ಯಯನ ನಡೆಸಿ ಸಾಮಾನ್ಯವಾಗಿ ಗುಂಡುಕಾಯದ ವ್ಯಕ್ತಿಗಳು ಉನ್ಮಾದ ವಿಷಣ್ಣತಾ (ಮೇನಿಕ್ ಡಿಪ್ರೆಸಿವ್) ಮನೋವಿಕ್ಷಿಪ್ತಿಯಿಂದಲೂ ನೀಳದೇಹಧಾರಿರೋಗಿಗಳು ಮನೋವಿದಳನ ರೋಗದಿಂದಲೂ ಆಯತದೇಹ ಧಾರಿಗಳಾದ (ಅತ್ಲೆಟಿಕ್) ರೋಗಿಗಳೂ ಅಪಸ್ಮಾರ ರೋಗದಿಂದಲೂ ನರಳುತ್ತಿರುತ್ತಾರೆಂಬುದನ್ನು ಗುರುತಿಸಿದ. ಮುಂದೆ ವಿವಿಧ ಸಂಶೋಧನೆಗಳು ನಡೆಯಲು, ಕ್ರೆಷ್ಮರನ ಸಿದ್ಧಾಂತ ಪ್ರೇರಕಶಕ್ತಿಯಾದುದರಲ್ಲಿ ಸಂಶಯವಿಲ್ಲ.

	ಷೆಲ್‍ಡನ್ನನ ಕಾಯಪ್ರರೂಪ ಸಿದ್ದಾಂತ : ಸುಧಾರಿತ ಕ್ರೆಷ್ಮರನ ಸಿದ್ಧಾಂತವೆಂದು ಹೇಳಬಹುದಾದ ಪ್ರಸಿದ್ಧ ಕಾಯಪ್ರರೂಪಗಳ (ಫಿಸಿಕಲ್ ಟೈಪ್ಸ್) ಸಿದ್ಧಾಂತವನ್ನು ಷೆಲ್‍ಡನ್ 1943ರಲ್ಲಿ ಮುಂದಿಟ್ಟು ಇದನ್ನು ಕಾಯಪ್ರರೂಪದ ಮುಮ್ಮುಖ ಸಿದ್ಧಾಂತವೆಂದೂ (ಟ್ರೆಪಾರ್ಟೈಟ್) ಹೇಳುವುದುಂಟು. ಷೆಲ್‍ಡನ್ನನ ಪ್ರಕಾರ ವ್ಯಕ್ತಿಯ ಅಂಗರಚನೆಗೂ ಆತನ ಚಿತ್ತಪ್ರಕೃತಿಗೂ ಸಂಬಂಧವುಂಟು. ಈ ವಿಚಾರಧೋರಣೆಯ ತಾರ್ಕಿಕ ಹಿನ್ನಲೆಯನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು.

ಚಿತ್ರ-2
   
	ಚಿತ್ತ ಪ್ರಕೃತಿಗಳಿಗೂ ಅಂಗರಚನೆಗಳಿಗೂ ಇರುವ ಸಂಬಂಧದ ಹಿನ್ನಲೆಯಲ್ಲಿರುವ ಸರಳ ತರ್ಕವನ್ನು ಮೇಲಿನ ಚಿತ್ರ ಸ್ಪಷ್ಟಪಡಿಸುತ್ತದೆ. ಗ್ರಂಥಿಗಳು ಮತ್ತು ಇತರ ಜೀವರಸಾಯನಿಕ ನಿಯೋಗಿಗಳು ವ್ಯಕ್ತಿಯ ಬೆಳೆವಣಿಗೆಯನ್ನು ನಿಯಮಬದ್ಧಗೊಳಿಸುವುದಾದರೆ, ಮತ್ತು ಆಂತರಿಕ ವಾತಾವರಣಕ್ಕನುಗುಣವಾಗಿ (ಇಂಟರ್ನಲ್ ಕ್ಲೈಮೆಟ್), ಕಾರ್ಯಾತ್ಮಕ ಹಾಗೂ ಸಂಕೇತಾತ್ಮಕ ಮಟ್ಟಗಳು ನಿರ್ಧಾರವಾಗುವುದಾದರೆ, ಕಾಯಪ್ರರೂಪದಿಂದ ಚಿತ್ತಪ್ರಕೃತಿಯನ್ನು ಮತ್ತು ಚಿತ್ತಪ್ರಕೃತಿಯಿಂದ ಕಾಯರೂಪವನ್ನು ಗುರುತಿಸಲು ಸಾಧ್ಯವಾಗಬೇಕಾಗುತ್ತದೆ. ಈ ತರ್ಕಕ್ಕನುಗುಣವಾಗಿ, ಮೂರು ರೀತಿಯ ಕಾಯಪ್ರರೂಪಗಳಿಗೆ ತಕ್ಕಂತೆ ಮೂರು ರೀತಿಯ ಚಿತ್ತಪ್ರಕೃತಿಗಳಿರುತ್ತವೆ ಎಂಬುದು ಷೆಲ್‍ಡನ್ನನ ಅಭಿಮತ. ಆತ ಹೇಳುವ ಮೂರು ಕಾಯಪ್ರರೂಪಗಳೆಂದರೆ ಗುಂಡಾಕಾರ (ಎಂಡೊಮಾರ್ಫಿಕ್) ಕಾಯ. ಆಯತಾಕಾರ (ಮೀಸೋಮಾರ್ಫಿಕ್) ಕಾಯ ಮತ್ತು ನೀಳಾಕಾರ (ಎಕ್ಟೊಮಾರ್ಫಿಕ್) ಕಾಯ. ಇವುಗಳಿಗೆ ಸಂಬಂಧಿಸಿದಂತೆ ಕ್ರಮವಾಗಿ ಅಂತರವಯವ ಪ್ರಧಾನತೆ (ವಿಸರಟೋನೀಯ) ಕಾಯಪ್ರಧಾನತೆ (ಸೆರೆಬ್ರೊಟೋನೀಯ) ಮತ್ತು ಪ್ರಮಸ್ತಿಷ್ಕ ಪ್ರಧಾನತೆ (ಸೆರೆಬ್ರೊಟೋನೀಯ) ಎಂಬ ಚಿತ್ತಪ್ರಕೃತಿಗಳು ಕಂಡುಬರುತ್ತವೆ. ಗುಂಡಾಕಾರದ ವ್ಯಕ್ತಿ ಸ್ಥೂಲದೇಹಧಾರಿಯಾಗಿರುತ್ತಾನೆ. ಅವನಲ್ಲಿ ಕರುಳು ಮತ್ತು ಇತರ ಅಂತರವಯವಗಳು ಪ್ರಧಾನವಾಗಿರುತ್ತವೆ. ಅವನಲ್ಲಿರುವ ಬೊಜ್ಜು ಅಂತರವಯವಗಳ ಪ್ರಧಾನತೆಯ ಜೊತೆಗೆ ಅಧಿಕ ಕೊಬ್ಬು ಇರುವುದನ್ನೂ ಸೂಚಿಸುತ್ತದೆ. ಆಯತಾಕಾರಿಯಾದ ವ್ಯಕ್ತಿಯ ದೇಹ ಮೂಳೆ ಮತ್ತು ಮಾಂಸಖಂಡಗಳಿಂದ ತುಂಬಿರುತ್ತದೆ. ಇದಕ್ಕೆ ಉದಾಹರಣೆ ಕ್ರೀಡಾಪಟು. ಅಂಥವ ವಿಶಾಲವಾದ ಎದೆ ಮತ್ತು ಬಾಹುಗಳೂ, ಸಣ್ಣಪ್ರಮಾಣದ ಕಟಿ ಮತ್ತು ತರಂಗಿತ ಸ್ನಾಯುಗಳನ್ನು ಪಡೆದಿರುತ್ತಾನೆ. ನೀಳಕಾಯದ ವ್ಯಕ್ತಿಂiÀiಲ್ಲಿ ಮೃದವಾದ ಧರ್ಮ, ಉತ್ತಮತರ ಕೂದಲು ಮತ್ತು ಸೂಕ್ಷ್ಮವೇದಿ ತಂತು ಮಂಡಲಗಳಿರುತ್ತವೆ. ಆತ ಎತ್ತರವಾಗಿಯೂ ತೆಳುವಾಗಿಯೂ ಇರುವನಲ್ಲದೆ ಇಳಿಬಿದ್ದಿರುವ ಭುಜಗಳಿಂದ ಕೂಡಿರುತ್ತಾನೆ. ಅಂಥವನನ್ನು ಮೇಲೆ ಹೇಳಿದ ಇನ್ನಿಬ್ಬರೊಡನೆ ತಪ್ಪಾಗಿ ತಿಳಿಯುವ ಸಾಧ್ಯತೆ ಕಡಿಮೆ.

	ಷೆಲ್‍ಡನ್ ಮೂರು ಸ್ಪಷ್ಟ ದೇಹಪ್ರರೂಪವನ್ನು ಹೇಳಿದರೂ ಶುದ್ಧಪ್ರರೂಪಗಳು ಅಪರೂಪವೆಂಬುದನ್ನು ಮನಗಂಡಿದ್ದ. ಸಾಮಾನ್ಯವಾಗಿ ಎಲ್ಲ ಜನರಲ್ಲಿಯೂ ಈ ಮೂರೂ ಅಂಗಾಂಶಗಳು ಹೆಚ್ಚು ಕಡಿಮೆ ಕಂಡುಬರುತ್ತವೆ ಎಂಬುದನ್ನು ಮರೆಯಲಾಗದು. ಹೀಗಿರುವುದರಿಂದ ಒಬ್ಬ ವ್ಯಕ್ತಿಯ ಕಾಯಪ್ರರೂಪವೇನೆಂಬುದನ್ನು ನಿರ್ಧರಿಸಬೇಕಾದರೆ, ಈ ಮೂರೂ ಅಂಗಾಂಶಗಳ ಪರಿಶೀಲನೆ ನಡೆಯಬೇಕಾಗುತ್ತದೆ.

	ಷೆಲ್‍ಡನ್ ನಿರೂಪಿಸಿದ ಕಾಯಪ್ರರೂಪಗಳು ಮತ್ತು ಚಿತ್ತಪ್ರಕೃತಿ ಪ್ರರೂಪಗಳ ನಡುವಣ ಸಂಬಂಧವನ್ನು ಕೆಳಗಿನ ಕೋಷ್ಟಕದಲ್ಲಿ ಕಾಣಬಹುದು.
ಷೆಲ್‍ಡನ್ನನ ಕಾಯಪ್ರರೂಪಗಳು ಮತ್ತು ಚಿತ್ತಪ್ರಕೃತಿಗಳು

ಕಾಯಪ್ರರೂಪ
ಚಿತ್ತಪ್ರಕೃತಿ
ಎದ್ದುಕಾಣುವ ಲಕ್ಷಣಗಳು

ಗುಂಡಾಕಾರ(ದುಂಡಗೆ ಮೃದುವಾಗಿರುವ)       
ಅಂತರವಯವ ಪ್ರಧಾನತೆ 
ಆಹಾರಪ್ರಿಯತೆ, ಅತಿಯಾಗಿ ತಿನ್ನುವ ಪ್ರವೃತ್ತಿ, ಶಂಕಾಭಾವ, ಅರಕ್ಷಿತಭಾವ, ಸೌಜನ್ಯಶೀಲತೆ, ಸುಖನಿದ್ರೆ , ಸಾಮಾಜಿಕ ಸಂಪ್ರದಾಯಗಳಿಗೆ ಹೊಂದಿಕೆ.

ಆಯತಾಕಾರ (ಸ್ನಾಯು ಮತ್ತು ಮೂಳೆಗಳ  ಪ್ರಾಧಾನತೆ)
ಕಾಯ ಪ್ರಧಾನತೆ
ಸಾಹಸಪ್ರಿಯತೆ, ಆಯಾಸಕರ ವ್ಯಾಯಾಮ ಮತ್ತು ತಣ್ಣೀರಿನ       ತುಂತುರುಸ್ನಾನದಲ್ಲಿ ಇಷ್ಟ, ಉಡುಪಿ       ನತ್ತಅಷ್ಟಾಗಿ ಗಮನವಿಲ್ಲದಿರುವುದು,       ಇಷ್ಟಪಟ್ಟು ನೋವನ್ನು ಸಹಿಸುವುದು.

ಲಂಬಾಕಾರ (ದೇಹ ರಚನೆಯಲ್ಲಿ ದುರ್ಬಲತೆ) ಮತ್ತು ದಂಡಾಕಾರ     
ಪ್ರಮಸ್ತಿಷ್ಕ ಪ್ರಧಾನತೆ   
ಅಸಂಗಶೀಲತೆ, ಅಸೌಜನ್ಯ ಶೀಲತೆ, ವ್ಯಾಯಾಮದ 
ಬಗ್ಗೆ ಅನಾಸಕ್ತಿ, ಸಾಹಸ ಪ್ರಿಯತೆಯ ಲೋಪ, ಸುಲಭವಾಗಿ ನೋವನ್ನು ಸಹಿಸಲಾಗದಿರುವುದು.

	ಷೆಲ್‍ಡನ್ನನ ಕಾಯಪ್ರರೂಪಗಳು, ಕ್ರೆಷ್ಮರ್ ಪ್ರತಿಪಾದಿಸಿದ ಪ್ರರೂಪಗಳಿಗಿಂತ ಹೆಚ್ಚು ನಮ್ಯವೆನಿಸುವುದಾದರೂ ಅವುಗಳ ಬಗ್ಗೆ ಮನೋವಿಜ್ಞಾನಿಗಳಲ್ಲಿ ಭಿನ್ನಾಭಿಪ್ರಾಯಗಳು ಕಂಡುಬರುತ್ತವೆ. ಷೆಲ್‍ಡನ್ನನ ಅಧ್ಯಯನ ಸಾಪೇಕ್ಷವಾಗಿ ದೀರ್ಘಕಾಲಿಕವೂ ಪಾರಿಮಾಣಿಕವೂ ಆಗಿದ್ದರೂ ಆತ ನಡೆಸಿದ ಅಂಕಿಅಂಶಾತ್ಮಕ ವಿಶ್ಲೇಷಣೆಯಲ್ಲಿ ವ್ಯಾಪಕರೀತಿಯ ದೋಷಗಳಿದ್ದುದು ಬೆಳಕಿಗೆ ಬಂದಿದೆ. ಅಲ್ಲದೆ ಆ ಸಿದ್ಧಾಂತಗಳನ್ನು ಪರಿಶೀಲಿಸಲೆಂದು ನಡೆಸಲಾದ ಅಧ್ಯಯನಗಳಿಂದ ದೊರೆತ ತಥ್ಯಾಂಶಗಳಲ್ಲಿ ಮೇಳವಿಲ್ಲ. ಉದಾಹರಣೆಗೆ, ಗ್ಲುಯೆಕ್ ಮತ್ತು ಗ್ಲುಯೆಗ್‍ವಿಲೋಪಿಗಳ ಮೇಲೆ ಮತ್ತು ವಾಕರ್ ಮಕ್ಕಳ ನಡೆಸಿದ ಅಧ್ಯಯನಗಳಿಂದ ಮೇಲಿನ ಸಿದ್ಧಾಂತಕ್ಕೆ ಪರಿಪೋಷಕವಾದ ಪುರಾವೆಗಳು ದೊರೆತರೂ ಮೂಲ ಅಧ್ಯಯನದಲ್ಲಿ ಪಡೆದ ಸಹಸಂಬಂಧ ಗುಣಾಂಕಗಳ ಮಟ್ಟದ ಗುಣಾಂಕಗಳು ಒದಗಲಿಲ್ಲ. ಕಾಲೇಜಿನ ಹೊಸಬರ ಮೇಲೆ ನಡೆಸಲಾದ ಅಧ್ಯಯನವೊಂದರಲ್ಲಿ, ದೇಹಪ್ರರೂಪಗಳು ಮತ್ತು ಚಿತ್ತಪ್ರಕೃತಿಗಳ ನಡುವಣ ಸಹಸಂಬಂಧ ಬಹಲ ಅತ್ಯಲ್ಪವಿದ್ದುದು ಬೆಳಕಿಗೆ ಬಂತು. ಆದರೂ ದೈಹಿಕ ವ್ಯತ್ಯಾಸಗಳ ಅನುವಂಶೀಯತೆಗೆ ವಿಪುಲ ಸಾಕ್ಷ್ಯಾಧಾರಗಳಿರುವುದನ್ನು ನೋಡಿದಾಗ, ಚಿತ್ತಪ್ರಕೃತಿಯ ಮೇಲೆ ದೇಹಪ್ರರೂಪಗಳು ಪ್ರಭಾವ ಬೀರುವುದನ್ನು ಅಲ್ಲಗೆಳೆಯಲು ಬಹುಶಃ ಯಾರಿಗೂ ಸಾಧ್ಯವಾಗದು.

	ಚಿತ್ತಪ್ರಕೃತಿಗಳ ಅನುಭವಿಕ ಅಧ್ಯಯನಗಳು : ಚಿತ್ತಪ್ರಕೃತಿಗಳ ಬಗ್ಗೆ ಹೆಚ್ಚು ಹೆಚ್ಚು ನಿಖರವಾಗಿ ಜ್ಞಾನವನ್ನು ಪಡೆಯಲೆಂದು ನಡೆಸಿರುವ ಅಧ್ಯಯನಗಳಲ್ಲಿ ಪ್ರಮುಖವಾದವೆಂದರೆ ಯೋಗ್, ಗಿಲ್‍ಪೋರ್ಡ್ ಮತ್ತು ಐಸೆಂಕರ ಅಧ್ಯಯನಗಳು. ಚಿತ್ತಪ್ರಾಕೃತಿಕ ಪ್ರರೂಪಗಳ ನಿರೂಪಣೆಗೆ ಸಂಬಂಧಿಸಿದಂತೆ ಮನೋವಿಜ್ಞಾನವಲಯಗಳಲ್ಲಿ ಹೆಚ್ಚು ಗಮನ ಸೆಳೆದ ಸಿದ್ಧಾಂತವೆಂದರೆ ಕಾರ್ಲ್ ಜಿ. ಯೂಂಗನ ಅಂತರ್ಮುಖತೆ-ಬಹಿರ್ಮುಖತೆ ಸಿದ್ಧಾಂತ. ಈ ಸಿದ್ಧಾಂತದ ಪ್ರಕಾರ ಅಂತರ್ಮುಖಿಗಳು, ಆತ್ಮನಿಷ್ಠರೂ ಮೃದುಸ್ವಭಾವದರೂ ಆದರ್ಶವಾದಿಗಳೂ ಆಗಿರುತ್ತಾರೆ. ವಿಚಾರಗಳು, ಕಲ್ಪನೆಗಳು ಮತ್ತು ಅಂತರಂಗ ಜೀವನಗಳ ಬಗ್ಗೆ ಅವರು ಹೆಚ್ಚು ಆಸಕ್ತರಾಗಿರುತ್ತಾರೆ. ಅಲ್ಲದೆ, ಹೆಚ್ಚು ಸಮಯವನ್ನು ಏಕಾಕಿಗಳಾಗಿಯೂ ಓದುವುದರಲ್ಲಿಯೂ ಚದುರಂಗದಂಥ ಆಟಗಳನ್ನು ಆಡುವುದರಲ್ಲಿಯೂ ಕಳೆಯಲು ಇಚ್ಛಿಸುತ್ತಾರೆ. ತದ್ವಿರುದ್ಧವಾಗಿ, ಬಹಿರ್ಮುಖಿಗಳು ಹೊರಗಿನ ಆಗುಹೋಗುಗಳತ್ತ ತಮ್ಮ ಗಮನಹರಿಸುವ ಪ್ರವೃತ್ತಿಯಿಂದ ಕೂಡಿರುತ್ತಾರೆ. ಮೂಲತಃ ಅವರು ಸಾಮಾಜಿಕ ಚಟುವಟಿಕೆಗಳು ಮತ್ತು ವ್ಯಾವಹಾರಿಕ ವಿಷಯಗಳ ಬಗ್ಗೆ ಆಸಕ್ತರಾಗಿರುತ್ತಾರೆ. ಹೆಚ್ಚು ವಾಸ್ತವವಾದಿಗಳಾಗಿರುತ್ತಾರೆಯಲ್ಲದೆ ಏಕಾಂಗಿಗಳಾಗಿರಲು ಇಚ್ಛಿಸುವುದಿಲ್ಲ. 

	ಅಂತಮುರ್ಖತೆ ಮತ್ತು ಬಹಿರ್ಮುಖತೆಗಳ ಬಗ್ಗೆ ಕೊಡಲಾದ ಮೇಲಿನ ಸಂಕ್ಷಿಪ್ತ ವಿವರಣೆ ಸಾಮಾನ್ಯ ಜನರ ಅಭಿಪ್ರಾಯಗಳಿಗೆ ಅನುಗುಣವಾಗಿ ಇರುವುದಾದರೂ ವಾಸ್ತವವಾಗಿ ಅಪ್ಪಟ ಅಂತರ್ಮುಖಿ ಹಾಗೂ ಬಹಿರ್ಮುಖಿ ಜನ ಯಾವುದೇ ಜನತೆಯಲ್ಲಿ ಅಪರೂಪವೆಂಬುದನ್ನು ಮನಗಾಣಬೇಕು. ಉಭಯಮುಖತೆ (ಆಂಬಿವರ್ಷನ್) ಎಂಬ ಒಂದು ಚಿತ್ತಪ್ರಕೃತಿಯೇ ಸಾಮಾನ್ಯವಾಗಿ ಬಹುಜನರಲ್ಲಿ ಕಂಡುಬರುವುದನ್ನು ಯೂಂಗ್ ಕಡೆಗಣಿಸಿಲ್ಲ.

	ಚಿತ್ತಪ್ರಕೃತಿಯ ಪ್ರರೂಪಕ್ಕೆ ಸಂಬಂಧಿಸಿದಂತೆ ಮುಂದಿಡಲಾಗಿರುವ ಪ್ರಮುಖ ಕಲ್ಪಿತಭಾವಗಳನ್ನು ಐಸೆಂಕನ ರೇಖಾಚಿತ್ರಗಳು ಸೂಚಿಸುತ್ತವೆ.

ಚಿತ್ರ-3

	ಮೇಲಿನ ಚಿತ್ರದ (ಅ) ಎರಡು ಸ್ಪಷ್ಟ ಪ್ರರೂಪಗಳನ್ನು ಸೂಚಿಸುವುದರಿಂದ ಅದು ದ್ವಿ-ಪ್ರರೂಪ ಸಿದ್ಧಾಂತದ ಸೂಚಕವಾಗಿದೆ. ಆದರೆ ಇಂದು ಈ ಸಂಕಲ್ಪನೆಗೆ ಯಾವ ಸಾಕ್ಷ್ಯಾಧಾರವೂ ಇಲ್ಲ. ಚಿತ್ರದಲ್ಲಿ ಮೂರು ಸಾಪೇಕ್ಷವಾಗಿ ಸ್ಪಷ್ಟಪ್ರರೂಪಗಳನ್ನು ಸೂಚಿಸಿರುವುದರಿಂದ ಅದು ಮು-ಪ್ರರೂಪ ಸಿದ್ಧಾಂತ ಸೂಚಕವಾಗಿದೆ. ಅಂತರ್ಮುಖತೆ, ಉಭಯಮುಖತೆ (ಚಿತ್ರದ ಶೃಂಗ) ಮತ್ತು ಬಹಿರ್ಮುಖತೆಗಳೇ ಈ ಮು-ಪ್ರರೂಪಗಳು. ಈ ಸಂಕಲ್ಪನೆಯೂ ಹಲವರ ಮನಸ್ಸಿಗೆ ಬಂದಿಲ್ಲ. ಏಕೆಂದರೆ, ಯಾವುದೇ ಒಂದು ಜನತೆಯಲ್ಲಿ, ಸ್ಪಷ್ಟವಾಗಿ ಮೂರು ರೀತಿಯ ಚಿತ್ತಪ್ರಕೃತಿಗಳಿರುವುದು ಅಸಂಭವ. ಈ ಕಾರಣದಿಂದಾಗಿ ಅಂತರ್ಮುರ್ಖತೆ-ಬಹಿರ್ಮುರ್ಖತೆ ಆಯಾಮದಲ್ಲಿ, ಈ ಚಿತ್ತಪ್ರಕೃತಿ ಹೇಗೆ ವಿತರಣೆಗೊಂಡಿದೆ ಎಂಬುದನ್ನು ಸೂಚಿಸಲಾಗಿದೆ. ಶುದ್ಧ ಚಿತ್ತಪ್ರಕೃತಿಯ ಜನರ ಸಂಖ್ಯೆ ತೀರ ಕಡಿಮೆ ಎಂಬುದನ್ನೂ ಮಿಶ್ರಚಿತ್ತಪ್ರಕೃತಿಯನ್ನು ಹೆಚ್ಚು ಕಡಿಮೆ ಹೊಂದಿರುವವರೇ ಅಧಿಕ ಸಂಖ್ಯೆಯಲ್ಲಿ ಕಾಣಸಿಗುತ್ತಾರೆಂಬುದನ್ನೂ ಈ ರೇಖಾಚಿತ್ರ ಸ್ಪಷ್ಟಪಡಿಸುತ್ತದೆ. ಒಟ್ಟಿನಲ್ಲಿ ಅಂತರ್ಮುಖತೆ ಮತ್ತು ಬಹಿರ್ಮುಖತೆ ಚಿತ್ತಪ್ರಕೃತಿಗಳು, ಒಂದೇ ಸಾಂತತ್ಯಕದ (ಕಂಟಿನ್ಯೂಯಮ್) ಅಂತ್ಯಗಳೆನಿಸುತ್ತವೆ. ಅಂದರೆ, ಯಾವುದೇ ಒಂದು ಜನತೆಯಲ್ಲಿರುವ ವ್ಯಕ್ತಿಗಳು ಈ ಎರಡು ಸ್ಪಷ್ಟಪ್ರರೂಪಗಳಿಗೆ ಸೇರಿರದೆ, ಅಂತಮುರ್ಖತೆ-ಬಹಿರ್ಮುಖತೆ ಸಾಂತತ್ಯಕದಾದ್ಯಂತ ವಿತರಣೆ ಹೊಂದಿರುತ್ತಾರೆ. ಅಂಥ ವಿತರಣೆ ಪ್ರಸಾಮಾನ್ಯ ಸಂಭಾವ್ಯ ವಕ್ರರೇಖೆಯನ್ನು (ನಾರ್ಮಲ್ ಪ್ರಾಬಬಿಲಿಟಿ ಕರ್ವ್) ಹೋಲುತ್ತದೆ ಎಂಬುದು ಸ್ಪಷ್ಟ. ಗಿಲ್‍ಪೋರ್ಡ್, ಐಸೆಂಕ್ ಮುಂತಾದವರು ನಡೆಸಿದ ಕಾರಕ ವಿಶ್ಲೇಷಣೆಯ (ಫ್ಯಾಕ್ಟರ್ ಅನ್ಯಾಲಿಸಿಸ್) ಅಧ್ಯಯನಗಳಿಂದ ದೊರೆತ ತಥ್ಯಾಂಶಗಳೂ ಮೇಲಿನ ಸಂಕಲ್ಪನೆಗೆ ಪುಷ್ಟಿಕೊಡುತ್ತವೆ.

	ಅಂತಮುರ್ಖತೆ ಮತ್ತು ಬಹಿರ್ಮುಖತೆ ಚಿತ್ತಪ್ರಕೃತಿಗಳೂ ಎರಡು ಆಯಾಮಗಳಲ್ಲಿ ವ್ಯಾಪಿಸುತ್ತವೆ ಎಂಬುದು ಐಸೆಂಕನ ಅಭಿಮತ. ಹಿನ್ನೆಲೆಯ ಅಂತಃಸ್ರಾವೀ ವ್ಯಾಪಾರವನ್ನು ಕಡೆಗಣಿಸಿ, ಮಾನಸಿಕ ಮಟ್ಟದಲ್ಲೇ ಇದ್ದುಕೊಂಡು, ಐಸೆಂಕ್ ಒಂದು ರೇಖಾಮಾದರಿಯ ಮೂಲಕ, ಪ್ರಾಚೀನ ಗ್ರೀಕ್ ಚಿತ್ತಪ್ರಕೃತಿಗಳು ಮತ್ತು ಆಧುನಿಕ ವಿಶೇಷಕ ಸಿದ್ಧಾಂತಗಳೊಂದಿಗೆ (ಟ್ರೇಟ್ ತಿಯೊರೀಸ್) ತನ್ನ ಸಿದ್ಧಾಂತಕ್ಕಿರುವ ಸಂಬಂಧವನ್ನು ಸ್ಪಷ್ಟಪಡಿಸುತ್ತಾನೆ. ಇದರಲ್ಲಿ ಆತ ಪ್ರಸ್ತಾಪಿಸಿರುವ ಎರಡು ಆಯಾಮಗಳೆಂದರೆ ಅಂತರ್ಮುಖತೆ-ಬಹಿರ್ಮುಖತೆ ಮತ್ತು ಸ್ಥಿರತೆ-ಅಸ್ಥಿರತೆ ಆಯಾಮಗಳು.

ಚಿತ್ರ-4

	ಚಿತ್ರದಲ್ಲಿರುವ ಒಳಗಿನ ವೃತ್ತ ಗ್ರೀಕರು ಹೇಳಿದ ನಾಲ್ಕು ಚಿತ್ತಪ್ರಕೃತಿಗಳನ್ನು ತೋರಿಸುತ್ತದೆ. ಹೊರಗಿನ ವೃತ್ತ ಐಸೆಂಕನ ಎರಡು ಪ್ರಧಾನ ಅಕ್ಷಗಳಿಗೆ ಸಂಬಂಧಿಸಿದಂತೆ ಕಾರಕ ವಿಶ್ಲೇಷಣ ವಿಧಾನದ ಮೂಲಕ ಅಧ್ಯಯನ ಮಾಡಲಾದ ವಿವಿಧ ವಿಶೇಷಕಗಳ ಸ್ಥಾನಗಳನ್ನು ಪ್ರತಿನಿಧಿಸುತ್ತದೆ.

	ಚಿತ್ತಪ್ರಾಕೃತಿಕ ಪ್ರರೂಪಗಳಿಗೂ ವಿಶೇಷಕಗಳಿಗೂ ಇರುವ ಸಂಬಂಧವನ್ನು ಐಸೆಂಕನ ಚಿತ್ರ ಸ್ಪಲ್ಪ ಮಟ್ಟಿಗೆ ಸೂಚಿಸಬಲ್ಲದು.

	ಅದರಲ್ಲಿ ತೋರಿಸಿರುವಂತೆ ಚಿತ್ತಪ್ರಕೃತಿ ಹಲವು ವಿಶೇಷಗಳ ಒಂದು ಸಮಾವೇಶ. ಒಂದೊಂದು ವಿಶೇಷಕವೂ ಹಲವು ಅಭ್ಯಸ್ಥ ಅನುಕ್ರಿಯೆಗಳ ಸಂಗಮವೆನಿಸಿದರೆ ಒಂದೊಂದು ಅಭ್ಯಸ್ಥ ಅನುಕ್ರಿಯೆಯೂ ಕೆಲವು ಪ್ರತ್ಯೇಕ ಅನುಕ್ರಿಯೆಗಳ ಸಂಘರ್ಷಣೆಯಿಂದ ಉಂಟಾದದ್ದು.
ಚಿತ್ರ-5

ಹೀಗೆ ಒಂದು ಅನುಕ್ರಮ ಶ್ರೇಣಿಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವಂಥ ವರ್ತನಾವಿನ್ಯಾಸ (ಉದಾ: ಚಿತ್ತಪ್ರಕೃತಿ) ಸಾಪೇಕ್ಷವಾಗಿ ನಾಲ್ಕು ಪ್ರರೂಪಗಳೆನಿಸುವುದನ್ನು ಚಿತ್ರದಲ್ಲಿ ಕಾಣಬಹುದು. ಇದನ್ನನುಸರಿಸಿಯೇ ಐಸೆಂಕ್ ಸ್ಥಿರ ಬಹಿರ್ಮುಖಿ, ಸ್ಥಿರ ಅಂತರ್ಮುಖಿ, ಅಸ್ಥಿರ ಅಂತರ್ಮುಖಿ ಮತ್ತು ಅಸ್ಥಿರ ಬಹಿರ್ಮುಖಿ ಎಂಬ ನಾಲ್ಕು ಚಿತ್ತ ಪ್ರಾಕೃತಿಕ ಪ್ರರೂಪಗಳನ್ನು ಪ್ರಸ್ತಾಪಿಸಿರುವುದನ್ನು ಕಾಣಬಹುದು.

	ಚಿತ್ತಪ್ರಕೃತಿಯನ್ನು ಅಳೆಯಲು ಐಸೆಂಕನ ವ್ಯಕ್ತಿತ್ವ ಅಂಶಮಾಲೆ ಮಾತ್ರವಲ್ಲದೆ, ಇನ್ನೂ ಅನೇಕ ವ್ಯಕ್ತಿತ್ವ ಅಂಶಮಾಲೆಗಳನ್ನು ಉಪಯೋಗಿಸಲಾಗಿದೆ. ಉದಾಹರಣೆಗೆ, ಗಿಲ್‍ಪೋರ್ಡ್-ಜಿಮ್ಮರ್‍ಮನ್ ಚಿತ್ತಪ್ರಾಕೃತಿಕ ಸಮೀಕ್ಷಣೆ, ಕೃಷ್ಣನ್ ಚಕ್ರವಿಕ್ಷಿಪ್ತತೆ-ಮನೊವಿದಳನಶೀಲತೆ ಪ್ರಶ್ನಾವಳಿ-ಇವು ಚಿತ್ತ ಪ್ರಕೃತಿಯ ಮಾಪನಕ್ಕಾಗಿಯೇ ಮೀಸಲಾಗಿದ್ದರೆ, ಎಂ.ಎಂ.ಪಿ.ಐ (ಮಿನೆಸೋಟ ಮಲ್ಟಿಫೇಸಿಕ್ ಪರ್ಸನ್ಯಾಲಿಟಿ ಇನ್ವೆಂಟರಿ), ಎಂ.ಪಿ.ಐ.(ಮೈಸೂರ್ ಪರ್ಸನ್ಯಾಲಿಟಿ ಇನ್ವೆಂಟರಿ) ಮುಂತಾದ ಬಹು ಆಯಾಮೀ ಅಂಶಮಾಲೆಗಳಲ್ಲಿ ಚಿತ್ತಪ್ರಾಕೃತಿಕ ಆಯಾಮವನ್ನು ಅಳೆಯಲು ಅವಕಾಶವಿರುವುದನ್ನು ಕಾಣಬಹುದು.

	ಕೃಷ್ಣನ್ ಚಕ್ರವಿಕ್ಷಿಪ್ತತೆ-ಮನೋವಿದಳನಶೀಲತೆ ಪ್ರಶ್ನಾವಳಿಯನ್ನು ಉಪಯೋಗಿಸಿಕೊಂಡು, ಮೈಸೂರು ವಿಶ್ವವಿದ್ಯಾನಿಲಯ ಮತ್ತು ಇತರ ಕಡೆಗಳಲ್ಲಿ ಅನೇಕ ಅಧ್ಯಯನಗಳು ನಡೆದಿವೆ. ಚಿತ್ತಪ್ರಕೃತಿ ಮತ್ತು ದೃಢತೆ, ಚಿತ್ತಪ್ರಕೃತಿ ಮತ್ತು ಮನೋದೌರ್ಬಲ್ಯಶೀಲತೆ, ಚಿತ್ತಪ್ರಕೃತಿ ಮತ್ತು ರೋಷಾಕ್ ಅನುಕ್ರಿಯೆಗಳು ಮುಂತಾದ ನಾನಾವಿಧವಾದ ಸಮಸ್ಯೆಗಳ ಮೇಲೆ ಅಧ್ಯಯನಗಳು ನಡೆದಿವೆ. ಇವುಗಳಲ್ಲದೆ ಗಿಲ್‍ಪೋರ್ಡ್ ಮತ್ತು ಜಿóಮ್ಮರ್‍ಮನ್ ಚಿತ್ತಪ್ರಾಕೃತಿಕ ಸಮೀಕ್ಷೆಯನ್ನು ಜಯಸ್ವಾಲ್ ಮತ್ತು ಖಾನ್ ಅನೇಕ ಅಧ್ಯಯನಗಳಿಗೆ ಬಳಸಿಕೊಂಡಿದ್ದಾರೆ. ಎಂ.ಎಂ.ಪಿ.ಐ ಅಂಶಮಾಲೆಯನ್ನೂ ಬಳಸಿಕೊಂಡು ಹಲವರು ವ್ಯಕ್ತಿತ್ವದ ಇತರ ಅಂಗಾಂಶಗಳ ಜೊತೆಗೆ ಚಿತ್ತಪ್ರಕೃತಿಯನ್ನೂ ಅಳತೆ ಮಾಡಿರುವುದು ಕಂಡುಬರುತ್ತದೆ.

	ಇಂದಿನ ದೃಷ್ಟಿ : ಚಿತ್ತಪ್ರಕೃತಿ ಮತ್ತು ಅದರ ಸ್ವಭಾವದ ಬಗ್ಗೆ ಇಂದು ಮನೋವಿಜ್ಞಾನಿಗಳಲ್ಲಿ ಕಂಡುಬರುವ ದೃಷ್ಟಿಯೆಂದರೆ, ಅದು ಮನಸ್ಸಿನ ಒಂದು ಸ್ವರೂಪ ಅಥವಾ ಪರಿಪಾಟಿ ಎಂಬುದು. ಅದು ಮೂಲತಃ ದೇಹಪ್ರಕೃತಿಯನ್ನು ಅವಲಂಬಿಸಿದ್ದರೂ ಇಲ್ಲವೆ ಅದಕ್ಕೆ ಸಂಬಂಧಿಸಿದ್ದರೂ ಪ್ರತ್ಯಾವರಣದ ಪ್ರಭಾವಗಳೂ ಸಾಕಷ್ಟಿರುತ್ತವೆ. ಈ ವಿಷಯದ ಬಗ್ಗೆ ನಡೆದಿರುವ ಮತ್ತು ನಡೆಯುವ ಸಂಶೋಧನೆಗಳು ಒಂದು ಪ್ರತ್ಯೇಕ ಮನೋವಿಜ್ಞಾನ ಶಾಖೆಯೇ ಆಗಿ ದೇಹಪ್ರಕೃತಿ ಮನೋವಿಜ್ಞಾನ (ಕಾನ್‍ಸ್ಟಿ ಟ್ಯೂಷನಲ್ ಸೈಕಾಲಜಿ) ಎಂಬ ಹೆಸರನ್ನು ತಾಳಿದೆ.

	ಆಲ್ಬೋರ್ಟ್ ಹೇಳುವಂತೆ, ವ್ಯಕ್ತಿತ್ವ ರೂಪಣೆಯಲ್ಲಿ ದೇಹ ಮತ್ತು ಬುದ್ಧಿಶಕ್ತಿಗಳಂತೆಯೇ ಚಿತ್ತಪ್ರಕೃತಿಯೂ ಒಂದು ಮೂಲವಸ್ತುವೆನಿಸುತ್ತದೆ. ಅದು ಮೂಲತಃ ದೇಹದ ರಾಸಾಯನಿಕ ವಾತಾವರಣ ಇಲ್ಲವೆ ಆಂತರಿಕ ವಾಯುವಿನ್ಯಾಸವೆನಿಸುತ್ತದೆ. ವ್ಯಕ್ತಿತ್ವದ ವಿಕಾಸ, ವಿನ್ಯಾಸಗಳಲ್ಲಿ ಈ ಮೂಲಾಂಶದ ಪಾತ್ರವೂ ಅನುಪಮವಾದುದು. ದೇಹದ ರಾಸಾಯನಿಕ ವಾತಾವರಣ ಪ್ರಮುಖವಾಗಿ ಅಂತಃಸ್ರಾವ ವ್ಯಾಪಾರಗಳಿಗೆ ಅನ್ವಯಿಸುತ್ತದೆ. ಆಧುನಿಕ ಮನೋವಿಜ್ಞಾನಿಗಳಲ್ಲಿ ಹಲವರ ಪ್ರಕಾರ, ಅಂತಃಸ್ರಾವಗಳೇ ಚಿತ್ತ ಪ್ರಕೃತಿಯ ಹಿನ್ನೆಲೆಯಲ್ಲಿ ಕ್ರಿಯಾಶೀಲವಾಗಿರುವ ದೈಹಿಕನೆಲೆಗಳು.
ಅಂತಃಸ್ರಾವಗಳು ವ್ಯಕ್ತಿಯ ಬೆಳೆವಣಿಗೆಯ ವಿವಿಧ ಹಂತಗಳಲ್ಲಿ ವಿಶಿಷ್ಟವಾದ ಪ್ರಭಾವ ಬೀರುವುದು ಕಂಡುಬರುತ್ತದೆಯಲ್ಲದೆ, ಅವನ ಚಿತ್ತಪ್ರಕೃತಿಯನ್ನು ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಬಹುಮಟ್ಟಿಗೆ ನಿರ್ಧರಿಸುತ್ತವೆ. ತೈಮಸ್ ಗ್ರಂಥಿಯ ವ್ಯಾಪಾರಗಳ ಬಗ್ಗೆ ಅಷ್ಟಾಗಿ ಸ್ಪಷ್ಟಜ್ಞಾನ ದೊರೆಯದಿದ್ದರೂ ತೈಮಿಕ್ ಕೊರತೆಯುಂಟಾದಾಗ ಸ್ನಾಯು ದೌರ್ಬಲ್ಯ, ಅಸ್ಥಿಗಳು ಗಡುಸಾಗುವುದರಲ್ಲಿನ ಕೊರತೆ ಮತ್ತು ಸಾಮಾನ್ಯ ಚಯಾಪಚಯ ಕ್ರಿಯೆಗಳಲ್ಲಿ ಅಸ್ತವ್ಯಸ್ತತೆ-ಇವು ಉಂಟಾಗುತ್ತವೆ. ಇದರಂತೆಯೇ ಪೀನಿಯಲ್ ಗ್ರಂಥಿಯ ಬಗೆಗಿನ ಜ್ಞಾನವೂ ಅಲ್ಪವೆನಿಸಿದರೂ ಅವನ್ನು ನಾಶಮಾಡುವುದರಿಂದ ಲೈಂಗಿಕ ಬೆಳೆವಣಿಗೆ ವಿಪರೀತ ಮುಂಚಿತವಾಗಿ ಆಗುವುದು ಕಂಡುಬಂದಿದೆ. ಅಂತಃಸ್ರಾವೀ ಗ್ರಂಥಿಗಳ 'ಸಂಗೀತ ನಿರ್ದೇಶಕ ಎನಿಸಿರುವ ಪಿಟ್ಯೂಇಟರಿ ಗ್ರಂಥಿ ಹಲವು ಅಂತಃಸ್ರಾವಗಳ ಜನಕನೆನಿಸಿದ್ದು, ಇತರ ಗ್ರಂಥಿಗಳ ಮತ್ತು ದೇಹದ ಸಾಮಾನ್ಯ ವ್ಯಾಪಾರಗಳ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ಮುಂಬದಿಯ ಪಿಟ್ಯೂಟರಿಗ್ರಂಥಿ ಜೀವನಕ್ಕೆ ಅತ್ಯವಶ್ಯವಾಗಿ ಬೇಕಾಗಿರುವ ಗ್ರಂಥಿ ಭಾಗವೆನಿಸಿದೆ. ಇದರ ಕ್ರಿಯೆಯಲ್ಲಿ ಕೊರತೆಯುಂಟಾದಾಗ ಶೈಶವದ ಲಕ್ಷಣಗಳು ತೋರಿದರೆ, ಇದರ ಕ್ರಿಯೆ ಅತಿಯಾದಾಗ ಎಲುಬುಗಳ ಹಾಗೂ ಲೈಂಗಿಕ ಅಂಗಗಳ ಬೆಳೆವಣಿಗೆಗಳು ತ್ವರಿತಗತಿಯಲ್ಲಿ ಸಾಗುತ್ತವೆ.

	ತೈರಾಯಿಡ್ ಗ್ರಂಥಿ ವ್ಯಕ್ತಿಯ ಜೀವಿತಾದ್ಯಂತ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆಯಲ್ಲದೆ, ಅದರ ಕ್ರಿಯೆಯಲ್ಲಿ ಕೊರತೆಯುಂಟಾದಾಗ ಜಡಕುಬ್ಜತೆ (ಕ್ರೀಟನಿಸಮ್) ಮತ್ತು ಮಿಕ್ಸಿಡೀಮ ಎಂಬ ರೋಗಗಳಿಗೆ ಕಾರಣವಾಗುತ್ತದೆ. ಪ್ಯಾರತೈರಾಯಿಡ್ ಗ್ರಂಥಿ ಕರುಳಿನ ಜೀವಾಣು ವಿಷಗಳನ್ನು ನಿಯಂತ್ರಿಸುವುದಲ್ಲದೆ, ಸುಣ್ಣ ಚಯಾಪಚಯ ಕ್ರಿಯೆಯಲ್ಲಿಯೂ ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ಮೂತ್ರಪಿಂಡಸ್ಥ ಗ್ರಂಥಿಗಳು (ಅಡ್ರಿನಲ್ ಗ್ಲ್ಯಾಂಡ್ಸ್) ಉತ್ಪತ್ತಿ ಮಾಡುವ ಅಂತಃಸ್ರಾವಗಳಲ್ಲಿ ಒಂದೆನಿಸಿದ ಅಡ್ರಿನಲಿನ್ ಸಂವೇಗಾನುಭವದಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆಯಲ್ಲದೆ, ತಂತುಕ್ರಿಯೆಗಳನ್ನು ಪ್ರಚೋದಿಸಿ, ಶಕ್ತಿನೀಡಿ ಮುಂದುವರಿಸುತ್ತದೆ. ಈ ಗ್ರಂಥಿಗಳು ಸಾಕಷ್ಟು ಬೆಳೆಯದಿದ್ದರೆ, ವ್ಯಕ್ತಿಯಲ್ಲಿ ದುರ್ಬಲತೆ, ಶರಣಾಗತಿಶೀಲತೆ ಚಂಚಲ ವೃತ್ತಿಗಳು ಕಂಡುಬರುತ್ತವೆ. ಇದೇ ರೀತಿಯಲ್ಲಿ ಲಿಂಗಗ್ರಂಥಿಗಳ ಪ್ರಭಾವವೂ ಮಹತ್ವಪೂರ್ಣವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಉದಾಹರಣೆಗೆ ಬಹಳ ಚಿಕ್ಕಂದಿನಲ್ಲಿಯೇ ವಿರ್ಯಾಶಯಗಳನ್ನು ತೆಗೆದುಹಾಕಿದರೆ ಜನನೇಂದ್ರಿಯಗಳು ಬೆಳೆಯುವುದಿಲ್ಲವಲ್ಲದೆ ಆನುಷಂಗಿಕ ಲಿಂಗಲಕ್ಷಣಗಳೂ ಕಾಣಿಸಿಕೊಳ್ಳುವುದಿಲ್ಲ. ಇಷ್ಟಲ್ಲದೆ ಅಕಾಲದಲ್ಲಿ, ಲೈಂಗಿಕ ಪರಿಪಕ್ವತೆ ಉಂಟಾದರೆ ಚಿತ್ತಪ್ರಕೃತಿಯ ಮೇಲೆ ಬಹಳ ಪ್ರಭಾವ ಬೀಳುವುದು ಸತ್ಯದಸಂಗತಿ. ಒಟ್ಟಿನಲ್ಲಿ ಹೇಳುವುದಾದರೆ, ಚಿತ್ತ ಪ್ರಕೃತಿಗೂ ಅಂತಃಸ್ರಾವಕಗಳ ವ್ಯಾಪಾರಗಳಿಗೂ ನೇರ ಸಂಬಂಧವಿರುವುದು ಕಂಡುಬರುತ್ತದೆ. ಮುಂದಿನ ಕೋಷ್ಟಕದಲ್ಲಿ ಕೊಡಲಾಗಿರುವ ಕೆಲವು ಅಂತಃಸ್ರಾವಕ ವ್ಯಾಪಾರಗಳನ್ನು ನೋಡಿದಾಗ ಚಿತ್ತಪ್ರಕೃತಿಯನ್ನು ನಿರ್ಧರಿಸುವಲ್ಲಿ ಅವುಗಳ ಪಾತ್ರವೇನೆಂಬುದನ್ನು ಸೂಚ್ಯವಾಗಿಯಾದರೂ ತಿಳಿಯಲು ಸಾಧ್ಯವಾಗುತ್ತವೆ.

	ಚಿತ್ತಪ್ರಕೃತಿಯ ಬಗ್ಗೆ ಅಗತ್ಯ ಅರಿವನ್ನು ಪಡೆಯಲು ನಾವು ಹೆಚ್ಚು ಹೆಚ್ಚಾಗಿ, ಮಾನವ ಪ್ರಜನನ ವಿಜ್ಞಾನ, ಜೀವರಾಸಾಯನಿಕ ಶಾಸ್ತ್ರ, ತಂತುಮಂಡಲ ವಿಜ್ಞಾನ, ಅಂತಃಸ್ರಾವೀಗ್ರಂಥಿವಿಜ್ಞಾನ ಮತ್ತು ಭೌತಿಕ ಮಾನವಶಾಸ್ತ್ರ ಸಂಶೋಧನೆಗಳಲ್ಲಿ ನಡೆಸುವ ಅಗತ್ಯವಿದೆ. ವ್ಯಕ್ತಿತ್ವದಲ್ಲಿ ಚಿತ್ತಪ್ರಕೃತಿಯ ಪ್ರಭಾವ ಬಹಳ ಮಹತ್ತ್ವಪೂರ್ಣವೆನಿಸಿದ್ದರೂ ಚಿತ್ತಪ್ರಕೃತಿಯ ನೆಲೆ ಏನೆಂಬುದರ ಬಗ್ಗೆಯೇ ನಮ್ಮ ತಿಳಿವು ಇನ್ನೂ ಹೆಚ್ಚು ನಿಷ್ಕøಷ್ಟವಾಗುವ ಅಗತ್ಯವಿದೆ. ಮನೋವೈಜ್ಞಾನಿಕ ಪರೀಕ್ಷೆಗಳು ಈ ದಿಸೆಯಲ್ಲಿ ಬಹಳ ನೆರವು ನೀಡುತ್ತವೆ. ಚಿತ್ತಪ್ರಕೃತಿಗಳ ಪ್ರಧಾನ ರೂಪಗಳನ್ನು ವರ್ಗೀಕರಿಸಲು ಬೇಕಾದ ಹೆಚ್ಚಿನ ಆಯಾಮಗಳನ್ನು ತಿಳಿದುಕೊಳ್ಳುವುದರಲ್ಲಿಯೂ ಈ ಪರೀಕ್ಷೆಗಳು ನೆರವಾಗಬಲ್ಲವು.

	ಚೋದನೆಗಳು ಮತ್ತು ಅವುಗಳ ಸತ್ತ್ವ-ಇವುಗಳೂ ಚಿತ್ತಪ್ರಕೃತಿಯ ನೆಲೆಗಳಾಗಿರುವ ಸಾಧ್ಯತೆ ಇಲ್ಲದಿಲ್ಲ. ಅಡಕಾಕ್ ಹೇಳುವಂತೆ ಇವನ್ನು ಅಧಿಕ ಪ್ರಮಾಣದಲ್ಲಿ ಪಡೆದಿರುವ ದೇಹಪ್ರಕೃತಿಗಳು ಅಧಿಕಮಟ್ಟದ ಚಯಾಪಚಯ ಕ್ರಿಯೆಯನ್ನು ಪ್ರಬಲ ತೈರಾಯಿಡ್ ವ್ಯಾಪಾರವನ್ನೂ ಹೊಂದಿರಬಹುದು.
ಅಂತಃಸ್ರಾವೀ ಗ್ರಂಥಿಗಳ ಕೆಲವು ವಿಶಿಷ್ಟ ರೀತಿಯ ವ್ಯಾಪಾರಗಳು
ಗ್ರಂಥಿ
ನಿಯಮಬದ್ಧಗೊಳಿಸುವ ಕಾರ್ಯಗಳು

ಪಿಟ್ಯುಇಟರಿ ಗ್ರಂಥಿ:
ಮುಂಬದಿ-
ಹಿಂಬದಿ-
ವೃದ್ಧಿ (ಕುಬ್ಜತೆ, ರಾಕ್ಷಸಾಕಾರ) ಪ್ರಭು ಗ್ರಂಥಿಯೆನಿಸಿ, ತೈರಾಯಿಡ್, ಮೇದೋಜೀರಕ, ಮೂತ್ರ ಪಿಂಡಸ್ಥ ಮತ್ತು ಜನನಗ್ರಂಥಿಗಳ ಮೇಲೆ ಪ್ರಭಾವ ಬೀರುತ್ತದೆ.ಜಲ ಚಯಾಪಚಯ ಕ್ರಿಯೆಗಳಲ್ಲಿ ಭಾಗವಹಿಸುತ್ತದೆ. 

ತೈರಾಯಿಡ್ ಗ್ರಂಥಿ
ಚಯಾಪಚಯ ಕ್ರಿಯೆಯ ವೇಗವನ್ನು ನಿಯಂತ್ರಿಸುವುದರ ಮೂಲಕ ಚಟುವಟಿಕೆ ಮತ್ತು ದಣಿವಿನ ಮೇಲೆ ಪ್ರಭಾವ ಬೀರುತ್ತದೆಯಲ್ಲದೆ ದೇಹದ ಭಾಗವನ್ನು ನಿರ್ಧರಿಸುತ್ತದೆ.

ಪ್ಯಾರ ತೈರಾಯಿಡ್ ಗ್ರಂಥಿ
ತೈಮಸ್ ಗ್ರಂಥಿ

ಸುಣ್ಣ ಚಯಾಪಚಯ ಮತ್ತು ತಂತುಮಂಡಲದ ಸಾಮಾನ್ಯ ಉತ್ತೇಜಕತೆಯನ್ನು ನಿಯಂತ್ರಿಸುತ್ತದೆ. 
ಲಿಂಫಾಯಿಡ್ ವ್ಯವಸ್ಥೆಯನ್ನು ನಿಯಂತ್ರಿಸುವುದರಲ್ಲಿಯೂ ದೇಹದ ಪ್ರತಿಬಂಧಕ ಪ್ರತಿಕ್ರಿಯೆಗಳ ಬೆಳೆವಣಿಗೆಯಲ್ಲಿಯೂ ಪ್ರಮುಖವಾದುದು.

ಮೂತ್ರಪಿಂಡಸ್ಥ (ಅಡ್ರಿನಲ್) ಗ್ರಂಥಿ ವಲ್ಕುಟ (ಕಾರ್ಟಿಕ್ಸ್)
ಜೀವನಿರ್ವಹಣೆಯ ನಿಯಂತ್ರಕಗಳನ್ನು ಸ್ರವಿಸುತ್ತದೆ. ಮನೋರೋಗದಲ್ಲಿಯೂ ಪ್ರಧಾನವಾಗಿರಬಹುದಲ್ಲದೆ, ಸಂವೇಗ ಕ್ರಿಯೆಯಲ್ಲಿ ಸಕ್ರಿಯವಾಗಿರುತ್ತದೆ.

ಮೆಡ್ಯುಲ
ಎಪಿನೆಫ್ರೈನ್ ಮತ್ತು ನಾರೆಎಪಿನೆಫ್ರೈನ್‍ಗಳ ಪ್ರಭಾವಗಳ ಮೂಲಕ ಸಂವೇಗದಲ್ಲಿ ಚಟುವಟಿಕೆಯಿಂದಿರುತ್ತದೆ.

ಜನನ ಗ್ರಂಥಿಗಳು
ಶಾರೀರಿಕ ಪರಿಪಕ್ವತೆಯ ಸಮಯದಲ್ಲಿ ಗಂಡುಹೆಣ್ಣುಗಳಲ್ಲಿ ವ್ಯತ್ಯಾಸ ತೋರಿಸುವಂಥ ಅನುಷಂಗಿಕ ಲಿಂಗ ಲಕ್ಷಣಗಳ ಬೆಳವಣಿಗೆ ಮತ್ತು ಜನನೇಂದ್ರಿಯಗಳ ಕ್ರಿಯಾತ್ಮಕ ಸ್ಥಿತಿಯನ್ನು ಉಳಿಸಿಕೊಂಡುಬರುವುದು ಇತ್ಯಾದಿ ಕಾರ್ಯಗಳು. 

	ಚಿತ್ತಪ್ರಕೃತಿಗಳ ಬಗ್ಗೆ ನಮಗೆ ಇಂದಿನ ವರೆಗೆ ದೊರೆತಿರುವ ಜ್ಞಾನದ ಆಧಾರದ ಮೇಲೆ ಹೇಳುವುದಾದರೆ, ಅವುಗಳಿಗೆ ದೈಹಿಕ ನೆಲೆಗಳಿರುವುದು ನಿರ್ವಿವಾದ ವಿಚಾರ. ಪ್ರಧಾನವಾಗಿ ಅಂತಃಸ್ರಾವ ವ್ಯಾಪಾರಗಳೂ ಚಿತ್ತಪ್ರಕೃತಿಗಳನ್ನು ನಿರ್ಧರಿಸುತ್ತವೆ ಎಂದು ಹೇಳುವುದಕ್ಕೆ ಪ್ರಾಚೀನ ಊಹೆಗಳು ಮಾತ್ರವಲ್ಲದೆ ಆಧುನಿಕ ಸಂಶೋಧನೆಗಳಿಂದ ದೊರೆತ ತಥ್ಯಾಂಶಗಳೂ ನಿದರ್ಶನಗಳಾಗಿವೆ. ಆದರೂ ಪ್ರತ್ಯಾವರಣದ ಪ್ರಭಾವದಿಂದ ಚಿತ್ತಪ್ರಕೃತಿಗಳು ಮುಕ್ತವಾಗಿಲ್ಲ. ಒಂದು ಸೀಮಿತ ರೀತಿಯಲ್ಲಿ ಪ್ರತ್ಯಾವರಣದ ಕಾರಕಗಳು ಅವುಗಳ ಸ್ವಭಾವ ಮತ್ತು ಬೆಳವಣಿಗೆಯ ಮೇಲೆ ಪ್ರಭಾವ ಬೀರಬಲ್ಲವು.		(ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ